ಎಕನಾಮಿಕ್ ಟೈಮ್ಸ್, ದಿ

ಭಾರತದ ಆರ್ಥಿಕ ಪತ್ರಿಕೋದ್ಯಮದ ಮೊಟ್ಟ ಮೊದಲ ಇಂಗ್ಲಿಷ್ ದಿನಪತ್ರಿಕೆ. ಬೊಂಬಾಯಿಂದ ಪ್ರಕಟವಾಗುತ್ತಿರುವ ಈ ಪತ್ರಿಕೆ ಸ್ಥಾಪನೆಯಾದದ್ದು 1961ರಲ್ಲಿ. ಭಾರತದಲ್ಲಿನ ಷೇರುಪೇಟೆ ವ್ಯವಹಾರ, ಆರ್ಥಿಕ ಚಟುವಟಿಕೆ, ಕೈಗಾರಿಕೆ, ವಾಣಿಜ್ಯ ಮುಂತಾದ ವಿಚಾರಗಳಿಗೆ ಸಂಬಂಧಿಸಿದಂತೆ ವಿಚಾರಪೂರಿತ ಲೇಖನಗಳನ್ನೂ ತಜ್ಞರ ಅಭಿಪ್ರಾಯಗಳನ್ನೂ ಸುದ್ದಿಗಳನ್ನೂ ಈ ಪತ್ರಿಕೆ ಪ್ರಕಟಿಸುತ್ತಿದೆ. ಟೈಮ್ಸ್ ಆಫ್ ಇಂಡಿಯ ಪತ್ರಿಕೆಗಳ ಗುಂಪಿನ ಬೆನ್ನೆಟ್ ಕೋಲ್‍ಮನ್ ಅಂಡ್ ಕಂಪನಿಯವರು ಪ್ರಕಟಿಸುತ್ತಿರುವ ಈ ಪತ್ರಿಕೆಗೆ ಪಿ.ಎಸ್.ಹರಿಹರನ್ ಪ್ರಥಮ ಸಂಪಾದಕರಾಗಿದ್ದರು. ಡಾ.ಡಿ.ಕೆ.ರಾಂಗಣಿಕರ್ ಈಗಿನ ಸಂಪಾದಕರು. ಇದರ ವಾಚಕವೃಂದದಲ್ಲಿ ದೇಶದ ಆರ್ಥಿಕ ತಜ್ಞರೂ ಷೇರುಪೇಟೆ ವ್ಯವಹಾರಗಾರರೂ ಬಂಡವಾಳಗಾರರೂ ವ್ಯಾಪಾರಸ್ಥರೂ ಕೈಗಾರಿಕೋದ್ಯಮಿಗಳೂ ಅರ್ಥಶಾಸ್ತ್ರ, ವಾಣಿಜ್ಯಶಾಸ್ತ್ರಗಳ ವಿದ್ಯಾರ್ಥಿಗಳೂ ಇದ್ದಾರೆ. ಸ್ವತಂತ್ರ ಭಾರತದ ಪತ್ರಿಕೋದ್ಯಮದ ಬೆಳವಣಿಗೆಯಲ್ಲಿ ಅಗತ್ಯವಾದ ವಿಚಾರವಿಮರ್ಶೆಗೆ ಅವಕಾಶ ಮಾಡಿಕೊಟ್ಟಿರುವ ಈ ಪತ್ರಿಕೆಯ ಹುಟ್ಟು ಬೆಳವಣಿಗೆಗಳು ದೇಶದ ಯೋಜನಾಬದ್ಧ ಆರ್ಥಿಕ ಪ್ರಗತಿಯ ಸಂಕೇತವಾಗಿದೆ. ವಿಶ್ವದ ಅನೇಕ ಆರ್ಥಿಕ ಪತ್ರಿಕೆಗಳೊಡನೆ ಇದು ಸಂಬಂಧ ಇಟ್ಟುಕೊಂಡಿದೆ. ಕೇಂದ್ರ ಕಾರ್ಯಾಲಯ ಮುಂಬೈ. ದೆಹಲಿ, ಕೊಲ್ಕತ್ತಾ, ಅಹಮದಾಬಾದ್, ಬೆಂಗಳೂರು, ಚೆನ್ನೈ ಮತ್ತು ಹೂದರಾಬಾದ್ ಕೇಂದ್ರಗಳಿಂದ ಪ್ರಕಟವಾಗುತ್ತದೆ.			 	 											 (ಬಿ.ಜಿ.ಟಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ